ಸಿರಿನೇಯಕ್ ಪಂಥ -
	ಸಿನಿಕ್ ಪಂಥಕ್ಕೆ ಪ್ರತಿಪಕ್ಷವಾದ ಪಂಥ. ಸುಖವೇ ಜೀವನದ ಗುರಿ ಎಂಬುದು ಈ ಪಂಥದ ಆಶಯವಾಗಿತ್ತು. ಅರಿಸ್ಟಿಪಸ್ ಈ ಪಂಥದ ಸಂಸ್ಥಾಪಕ. ಪ್ರಪಂಚದಲ್ಲಿ ಸುಖವಾಗಿ, ಸ್ವತಂತ್ರವಾಗಿ ಬಾಳಬೇಕೆಂದು ಬೋಧಿಸಿದ. ಮಾನವ ಅರಸುವ ಸುಖ ಕೇವಲ ವಿಷಯ ಸುಖವೇ ಆಗಿರದೆ ಅಂತರಂಗದ ಸುಖವೂ ಆಗಿರಬೇಕೆಂದು ಉಪದೇಶಿಸಿದ. ಸುಖ ಮತ್ತು ಸಂತೋಷವನ್ನು ಒದಗಿಸುವ ಯಾವುದೂ ದೂಷ್ಯವಲ್ಲವೆಂದು ಪ್ರತಿಪಾದಿಸಿದ. ಶಾಂತಿಯಿಲ್ಲದೆ ಸುಖವಿಲ್ಲ; ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವ ರೀತಿಯಲ್ಲಿ ಬದುಕಬೇಕು; ಆಹಾರ ವಿಹಾರಗಳಲ್ಲಿ ಮಿತಿ ಇರಬೇಕು. ಮಿತಿ ಮೀರಿದರೆ ದುಃಖ ಎಂದು ಬೋಧಿಸಿದ. ಈ ಪಂಥದ ಕೆಲವು ಅಂಶಗಳನ್ನು ಸಾಕ್ರಟೀಸ್‍ನಲ್ಲಿ ಕಾಣುಬಹುದು. ಎಲ್ಲರೂ ಬಯಸುವುದು ಸುಖವನ್ನು ಎಂದು ಒಪ್ಪಿಕೊಂಡ ಈ ಪಂಥದ ಮಂದಮತಿಗಳು, ಸುಖವೆಂದರೆ ವಿಷಯ ಸುಖವೆಂದೇ ಭಾವಿಸುತ್ತ ಅಪಮಾರ್ಗಕ್ಕೆ ಪ್ರವರ್ತಿಸಿದುದೂ ಕಂಡುಬರುತ್ತದೆ. ಆದರೆ ವಿಷಯ ಲೋಲುಪತೆ ಪ್ರತಿಪಾದಕ ಅರಿಸ್ಟಿಪಸ್‍ನ ಗುರಿಯಾಗಿರಲಿಲ್ಲ ಎಂಬುದನ್ನು ಗಮನಿಸಬಹುದು.		
	(ಎಮ್.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ